ರಾಚಮಲ್ಲ 3

ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನವಾದ ತಲಕಾಡು ಗಂಗವಂಶದ ದೊರೆ (933-36). ಎರಡನೆಯ ಎರೆಗಂಗನ ಮಗ. ಇಮ್ಮಡಿ ಬೂತುಗನ ಅಣ್ಣ ಮತ್ತು ನರಸಿಂಹನ ತಮ್ಮ. ಅಣ್ಣ ನರಸಿಂಹನ ಮರಣಾನಂತರ ಪಟ್ಟಕ್ಕೆ ಬಂದ. ಈತ ತನ್ನ ಅಲ್ಪಾವಧಿಯ ಅಧಿಕಾರ ಕಾಲದಲ್ಲೂ ಅನೇಕ ಯುದ್ಧಗಳನ್ನು ಮಾಡಬೇಕಾಗಿ ಬಂತು. ಇವನ ತಮ್ಮನಾದ ಬೂತುಗನಿಗೆ ರಾಷ್ಟ್ರಕೂಟ ಕನ್ಯೆ ರೇವಕನಿಮ್ಮಡಿಯನ್ನು ಕೊಟ್ಟು ಲಗ್ನವಾಗಿದ್ದಿತು. ಅಮೋಘವರ್ಷನ ತಮ್ಮ ಮುಮ್ಮಡಿ ಕೃಷ್ಣನಿಗೆ ರಾಜ್ಯ ಸಿಕ್ಕುವ ಹಾಗೆ ಬೂತುಗ ಸಹಾಯ ಮಾಡಿದ್ದ. ಇದಕ್ಕೆ ಪ್ರತಿಫಲವೆಂಬಂತೆ ಈಗ ಗಂಗರಾಜ್ಯ ತನಗೆ ದೊರೆಯಲು ಸಹಾಯ ಮಾಡಬೇಕೆಂದು ಕೃಷ್ಣನನ್ನು ಬೂತುಗ ಕೇಳಿದ. ಅಣ್ಣ ತಮ್ಮಂದಿರ ಜಗಳದಲ್ಲಿ ರಾಷ್ಟ್ರಕೂಟ ಕೃಷ್ಣ ಬೂತುಗನ ಪರವಾಗಿದ್ದ. ಇಂಥಾ ಒಳಜಗಳ ನಡೆಯುತ್ತಿರುವುದನ್ನು ಗಮನಿಸಿದ ನೊಳಂಬ ಅಣ್ಣಿಗ ಇದೇ ತಕ್ಕ ಸಮಯವೆಂದು ರಾಜಮಲ್ಲನ ಮೇಲೆ ಯುದ್ಧ ಮಾಡಿದ. ಕೊತ್ತಮಂಗಲದಲ್ಲಿ ನಡೆದ ಯುದ್ಧದಲ್ಲಿ ಅಣ್ಣಿಗ ಸೋತ. ಆದರೆ ರಾಚಮಲ್ಲ ಅವನನ್ನು ಕೊಲ್ಲದೆ, ಮುಂದೆ ಬೂತುಗನನ್ನು ಸೋಲಿಸಲು ಅವನ ನೆರವು ಅವಶ್ಯವೆಂದು ತಿಳಿದು, ಅವನನ್ನು ಸ್ನೇಹಿತನನ್ನಾಗಿ ಮಾಡಿಕೊಂಡ. ಆದರೆ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಿಂದ ಸಹಾಯ ಪಡೆದ ಇಮ್ಮಡಿಬೂತುಗ ತನ್ನ ಅಣ್ಣ ರಾಚಮಲ್ಲನನ್ನು ಯುದ್ಧದಲ್ಲಿ ಸೋಲಿಸಿದ್ದು ಮಾತ್ರವಲ್ಲದೇ, ಅವನನ್ನು ಕೊಂದು ಗಂಗರಾಜ್ಯವನ್ನು ತನ್ನದನ್ನಾಗಿ ಮಾಡಿಕೊಂಡ. ಕೆಲವು ಶಾಸನಗಳು ರಾಚಮಲ್ಲನನ್ನು ದುಷ್ಟನೆಂದೂ ಪ್ರಜಾಹಿಂಸಕನೆಂದೂ ವರ್ಣಿಸಿವೆ. ಆದರೆ ಅವುಗಳ ವಿವರ ತಿಳಿಯದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ